ಹೊಯಿಸಳ
	1893-1959. ಮಕ್ಕಳ ಸಾಹಿತ್ಯ ಲೇಖಕರು. ಆರಗ ಲಕ್ಷ್ಮಣರಾವ್ ಇವರ ಹೆಸರು. ಹೊಯಿಸಳ ಇವರ ಕಾವ್ಯನಾಮ. ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲ್ಲೂಕು ಆರಗ ಗ್ರಾಮದಲ್ಲಿ ಜನಿಸಿದರು. ತಂದೆ ಸುಬ್ಬಣ್ಣ. ಮದನಪಲ್ಲಿ ಕಾಲೇಜಿನಲ್ಲಿ ಓದಿ ಬಿ.ಎ. ಪದವಿಯನ್ನು ಪಡೆದ ಇವರಿಗೆ ಅಲ್ಲಿ ಆನಿಬೆಸೆಂಟ್, ಸಿ.ಎಫ್. ಆಂಡ್ರೂಸ್ ಮತ್ತು ಕಸಿನ್ಸ್ ದಂಪತಿಗಳ ನಿಕಟ ಪರಿಚಯವಾಯಿತು. ಇವರು 1919ರಲ್ಲಿ ಶಾಂತಿನಿಕೇತನಕ್ಕೆ ಹೋಗಿ ಸುಮಾರು ಎರಡು ವರ್ಷ ಕಾಲವಿದ್ದರು. ಶಾಂತಿನಿಕೇತನದ ವಾಸ ಇವರ ಬದುಕಿನ ಮೇಲೆ ಬಹುದೊಡ್ಡ ಪರಿಣಾಮವನ್ನುಂಟುಮಾಡಿತು. 1922ರಲ್ಲಿ ಮೈಸೂರು ವಿದ್ಯಾಭ್ಯಾಸ ಇಲಾಖೆಯನ್ನು ಸೇರಿ ಪ್ರೌಢಶಾಲಾ ಉಪಾಧ್ಯಾಯರಾಗಿ ನೇಮಕಗೊಂಡು, ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಕೆಲಸ ಮಾಡಿ ನಿವೃತ್ತರಾದರು. ಅನಂತರ ಬೆಂಗಳೂರು ಆಕಾಶವಾಣಿಯ ಮಕ್ಕಳ ಕಾರ್ಯಕ್ರಮದ ನಿರ್ವಾಹಕರಾಗಿ ಕೆಲಸ ಮಾಡಿದ ಇವರು ಪ್ರಜಾವಾಣಿ ಪತ್ರಿಕೆಯ ಮಕ್ಕಳ ವಿಭಾಗದ ಅಣ್ಣಾಜಿಯಾಗಿಯೂ ಕೆಲಕಾಲವಿದ್ದರು. ಮಕ್ಕಳಿಗಾಗಿಯೇ ಇವರು ಕನಕ ಎಂಬ ಪತ್ರಿಕೆಯನ್ನು ಆರಂಭಿಸಿ ಸ್ವಲ್ಪಕಾಲ ನಡೆಸಿದ್ದುಂಟು.
	ಇವರು ಮಕ್ಕಳಿಗಾಗಿ ಕವನಗಳನ್ನೂ ನಾಟಕಗಳನ್ನೂ ಕಥೆಗಳನ್ನೂ ದೊಡ್ಡ ಪ್ರಮಾಣದಲ್ಲಿ ರಚಿಸಿದ್ದಾರೆ. ಇವರ ಮೊದಲ ಬರೆಹಗಳು ಮಕ್ಕಳ ಪುಸ್ತಕ ಎಂಬ ಪತ್ರಿಕೆಯಲ್ಲಿ ಬೆಳಕು ಕಂಡವು. ಇವರ ಮೊದಲನೆಯ ಪುಸ್ತಕ ತಿರುಗ ಮುರುಗ ಎಂಬುದು ಗದ್ಯ-ಪದ್ಯ ಸಂಕಲನ. ಇವರು ಬರೆದಿರುವ ಸಂತಮ್ಮಣ್ಣ ಎಂಬ ಒಬ್ಬ ತುಂಟ ಬಾಲವಿದ್ಯಾರ್ಥಿಯ ಚಿತ್ರ ಕನ್ನಡದ ಮಕ್ಕಳ ಸಾಹಿತ್ಯದಲ್ಲಿ ಇವರಿಗೆ ಹಿರಿಯ ಸ್ಥಾನವನ್ನು ಗಳಿಸಿಕೊಟ್ಟಿತು. ಪ್ರಪಂಚದ ಅತಿ ಹಳೆಯ ಕಥೆಯಾದ ಅನ್ಬು-ಬಾಟದಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರನ್ನು ಕುರಿತ ನೋವು ಎಂಬ ಕಥೆಯ ವರೆಗೂ ಇವರ ಕಥೆಗಳ ವ್ಯಾಪ್ತಿ ಇದೆ. ಇವರ ಕೆಲವು ಮುಖ್ಯ ಕಥೆಗಳ ಸಂಗ್ರಹಗಳಿವು: ಹೂವಿನ ಹಾಸಿಗೆ, ಪುಟ್ಟರಸು, ಪಠಾಕ್ಷಿ, ಅನ್ಬು-ಬಾಟ, ಅದಕ್ಕೆ ಆ ಹೆಸರು, ಆನೆ ಇರುವೆ, ಗಂಟೆಗೋಪುರ, ಖೈದಿಗಳ ಕಷ್ಟ, ಪುಟ್ಟು ತಮ್ಮ ಯಾರು?, ಪೋರಿ, ಬದುಕುವ ಮಂತ್ರ, ನಿಶ್ಚಲ ಹಾಸ, ಅಭ್ಯಂಕು, ವೀರಕುಮಾರ, ಮಸೀದಿಯನ್ನು ಎಲ್ಲಿ ಕಟ್ಟಿದರು, ಶುಭಾಂಗ, ಬೋರ ನೆಟ್ಟ ಮೂಲಂಗಿ, ರಾಜನ ಬುದ್ಧಿವಂತಿಕೆ. ಇವರು ಮಕ್ಕಳಿಗಾಗಿ ಬರೆದಿರುವ ಕೆಲವು ಮುಖ್ಯ ಪದ್ಯ ಸಂಗ್ರಹಗಳಿವು: ಮಗುವಿನ ಕೂಗು, ಚಂದುಮಾಮ, ಕೋಲು ಕುದುರೆ, ಕೋಗಿಲೆ. ಮಗು, ಪ್ರಸಾದ, ಕುಳ್ಳ, ಸುಳ್ಳವಾತಾಪಿ, ಚಂದ್ರಹಾಸ, ಅಗಲಿನ ಮಗಳು, ಮಳ್ಳ- ಇವು ನಾಟಕಗಳು.
	ಇವರು ಹಿರಿಯರಿಗಾಗಿಯೂ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ರವೀಂದ್ರನಾಥ ಠಾಕೂರರ ವಸಂತ, ಜವಾಹರಲಾಲ್ ನೆಹರೂ ಅವರ ಮಗಳಿಗೆ ತಂದೆಯ ಓಲೆಗಳು-ಈ ಪುಸ್ತಕಗಳನ್ನು ಇವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.	
	    (ಕೆ.ಸಿ.)